ಅನಾಥಾಲಯಗಳು
	ತಂದೆ ತಾಯಿಗಳಿಲ್ಲದ, ನಿರಾಶ್ರಿತ ಹಾಗೂ ಅಲಕ್ಷಿತ ಮಕ್ಕಳಿಗೆ ಆಶ್ರಯ ನೀಡುವ ಸಂಸ್ಥೆಗಳು (ಆರ್ಫನೇಜಸ್). ಅನಾಥಸಂರಕ್ಷಣೆ ಅತ್ಯಂತ ಪ್ರಾಚೀನಕಾಲದಿಂದಲೂ ನಡೆದು ಬಂದಿರುವ ಒಂದು ಸಾಮಾಜಿಕ ವ್ಯವಸ್ಥೆ. ವಿಧವೆಯರಿಗೂ ತಬ್ಬಲಿಗಳಿಗೂ ಹಿಂಸೆ ಕೊಡಬಾರದು; ಅವರು ತಿಂದು ತೃಪ್ತರಾದರೆ ಭಗವಂತ ಪ್ರಸನ್ನನಾಗುವನು ಎಂಬ ಮಾತು ಅತ್ಯಂತ ಪ್ರಾಚೀನವಾದ ಹೀಬ್ರೂ ಮತಗ್ರಂಥಗಳಲ್ಲಿದೆ. ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ ವಿಧವೆಯರ ಮತ್ತು ತಬ್ಬಲಿಗಳ ದುಃಖದಲ್ಲಿ ನೆರವಾಗಬೇಕೆಂಬ ಉಪದೇಶವಿದೆ. ಆದ್ದರಿಂದ ಮೊಟ್ಟಮೊದಲಿನ ಚರ್ಚುಗಳು ಅನಾಥರಕ್ಷಣೆ ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿದುವು. ಕಾನ್ಸ್‍ಟೆಂಟೈನ್ ಕ್ರೈಸ್ತಧರ್ಮವನ್ನು ಸ್ವೀಕರಿಸಿದ ಮೇಲೆ ತಾನು ಅನಾಥರಕ್ಷಕನೆಂದು ಹೇಳಿಕೊಂಡಿದ್ದಾನೆ. 17ನೆಯ ಶತಮಾನಕ್ಕೂ ಹಿಂದೆ ಜರ್ಮನಿಯಲ್ಲಿ ಅನೇಕ ಅನಾಥ ಸಂರಕ್ಷಣಾಲಯಗಳು ಸ್ಥಾಪಿತವಾದುವು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಅಂತರ್ಯುದ್ಧವಾದಮೇಲೆ ಸೈನಿಕರ ನಿರ್ಗತಿಕ ಮಕ್ಕಳಿಗಾಗಿ ಅನಾಥಾಲಯಗಳು ಪ್ರಾರಂಭವಾದುವು. ಭಾರತದಲ್ಲಿ ರಾಜಮಹಾರಾಜರೂ ಚಕ್ರವರ್ತಿಗಳೂ ಧಾರ್ಮಿಕಗುರುಗಳೂ ಮಠಗಳೂ ಅನಾಥರ ಬಗ್ಗೆ ಅನುಕಂಪೆಯ ಮನೋಭಾವವನ್ನು ತಳೆದಿದ್ದು ವಿವಿಧ ರೀತಿಯಲ್ಲಿ ಅವರ ರಕ್ಷಣೆಯ ಹೊಣೆಯನ್ನು ಅನಾದಿಕಾಲದಿಂದಲೂ ನಿರ್ವಹಿಸುತ್ತ ಬಂದಿರುವ ವಿಷಯ ಸ್ಪಷ್ಟವಾಗಿದೆ.

	ಅನಾಥಾಲಯಗಳಲ್ಲಿ ಎರಡು ವಿಧ. 1. ಒಕ್ಕೂಟಪದ್ಧತಿ. 2. ಗುಡಿಸಲಪದ್ಧತಿ. 

	ಒಕ್ಕೂಟಪದ್ಧತಿಯಲ್ಲಿ ಅಡಿಗೆಮನೆ, ಊಟದಮನೆ, ಶಯನಗೃಹ, ಕ್ರೀಡಾಸದನ ಮತ್ತು ಶಾಲಾಕೊಠಡಿಗಳು-ಇವೆಲ್ಲ ಒಂದು ದೊಡ್ಡ ಮನೆಯಲ್ಲಿದ್ದು ಮಕ್ಕಳೆಲ್ಲರೂ ಅಲ್ಲಿಯೇ ವಾಸಿಸುತ್ತಾರೆ. ಗುಡಿಸಲಪದ್ಧತಿಯಲ್ಲಿ ಮಕ್ಕಳನ್ನು 15-20ರಂತೆ ವಿಂಗಡಿಸಿ ಬೇರೆ ಬೇರೆ ಗುಡಿಸಲುಗಳಲ್ಲಿ ವಾಸಿಸುವಂತೆ ಏರ್ಪಾಡು ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ಮನೆಯ ವಾತಾವರಣವಿದ್ದು ಪಾಠಶಾಲೆ, ಶಾಲೆಯ ಕೊಠಡಿ, ಊಟದಮನೆ, ಇವು ಮಾತ್ರ ಕೇಂದ್ರಗೃಹದಲ್ಲಿರುತ್ತವೆ. ಈಗ ಅನಾಥಾಲಯಗಳನ್ನು ಸಾರ್ವಜನಿಕ, ಸಾಮಾನ್ಯ ಮತ್ತು ಧಾರ್ಮಿಕ ಅನಾಥಾಲಯಗಳೆಂದು ವಿಂಗಡಿಸಬಹುದು. ಧಾರ್ಮಿಕ ಅನಾಥಾಲಯಗಳು ಧರ್ಮೋಪದೇಶದ ಅಡಿಪಾಯದ ಮೇಲೆ ನಿಂತಿವೆ. ಇವುಗಳ ಉದ್ದೇಶ ಮತೀಯ ಭಾವನಾಪ್ರಚೋದನೆಯೇ ಆಗಿದೆ.

	ಈಚಿನವರೆಗೂ ಇವು ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅತ್ಯಲ್ಪ ಆಸಕ್ತಿಯನ್ನು ವಹಿಸಿದ್ದುವು. ಸಂಕುಚಿತ ಮತಪಂಥಗಳ ಹಿನ್ನೆಲೆಯನ್ನು ಪಡೆದ ಅನಾಥಾಲಯಗಳು ದಿಕ್ಕಿಲ್ಲದ ಮಕ್ಕಳನ್ನು 12-14 ವರ್ಷಗಳವರೆಗೆ ತಮ್ಮಲ್ಲಿಟ್ಟುಕೊಂಡು ಅನಂತರ ಅವರ ಸಂಬಂಧಿಗಳ ಮನೆಗೂ ಸಂಬಳವಿಲ್ಲದೆ ಆಳುಗಳಾಗಿ ದುಡಿಯಲು ಇತರರ ಮನೆಗಳಿಗೂ ಕಳುಹಿಸುತ್ತಿದ್ದುವು. ಅನೇಕ ಅನಾಥ ಸಂರಕ್ಷಣಾಸಂಸ್ಥೆಗಳು ತಮ್ಮದೇ ಆದ ವಿದ್ಯಾಮಂದಿರಗಳನ್ನು ಹೊಂದಿರುವುದುಂಟು. ಅಲ್ಲಿ ಮಕ್ಕಳು ಪ್ರಾಥಮಿಕಮಟ್ಟವನ್ನು ಮುಟ್ಟುವುದು ಅಪರೂಪ. ಸಂಬಂಧಿಗಳ ಮನೆಯನ್ನೋ ಸಂಸಾರಿಗಳ ಮನೆಯನ್ನೋ ಸೇರಿದ ಮೇಲೆ ಶಾಲೆಯ ವಿದ್ಯಾಭ್ಯಾಸ ಪೂರ್ತ ನಿಲ್ಲುತ್ತದೆ. ಈ ಮಕ್ಕಳು ಜೀವನದ ಆಶೆ ಅಭಿವೃದ್ಧಿಗಳನ್ನು ಪ್ರಚೋದಿಸುವ ಶಾಲೆಯ ಅನುಭವದಿಂದ ವಂಚಿತರಾಗುತ್ತಾರೆ. ಈಚೆಗೆ ಈ ಬಗ್ಗೆ ಪ್ರe್ಞÁಪೂರ್ವಕದೃಷ್ಟಿ ಬೆಳೆದು ಸ್ವಪ್ರಯೋಜನಕ್ಕಾಗಿ ಬಾಲ್ಯಜೀವನವನ್ನು ಬಲಿಕೊಡುವುದು ಸಾಮಾಜಿಕ ನಷ್ಟವೆಂದು ಪರಿಗಣಿಸಲಾಗಿದೆ. ಪ್ರಗತಿಪರ ವಿದ್ಯಾಮಂದಿರಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಬುದ್ಧಿವಂತ ಮಕ್ಕಳಿಗೆ ಉನ್ನತಮಟ್ಟದ ವಿದ್ಯಾಭ್ಯಾಸ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಸಬುಕಲೆಗಳಲ್ಲಿ ವಿಶೇಷ ತರಬೇತಿಯನ್ನು ಪಡೆದ ಉಪಾಧ್ಯಾಯರನ್ನು ನೇಮಿಸಿ ಗಂಡುಮಕ್ಕಳಿಗೆ ಮರದ ಕೆಲಸ, ತೋಟದ ಕೆಲಸ, ಕೋಳಿಸಾಕಣೆ ಮೊದಲಾದವುಗಳಲ್ಲಿಯೂ, ಹೆಣ್ಣುಮಕ್ಕಳಿಗೆ ಅಡಿಗೆ ಮಾಡುವುದು, ಉಡುಪುಗಳನ್ನು ಹೊಲಿದು ಸಿದ್ಧಪಡಿಸುವುದು ಮುಂತಾದ ವಿದ್ಯೆಗಳಲ್ಲಿ ತರಬೇತಿಯನ್ನು ಕೊಡಲಾಗುತ್ತಿದೆ. ಹೀಗೆ ಗೃಹಜೀವನಕ್ಕೂ ತರಗತಿಯ ಜೀವನಕ್ಕೂ ಸಮನ್ವಯ ಏರ್ಪಟ್ಟು ಗೃಹಜೀವನದ ಬೆಳೆವಣಿಗೆಗೆ ಸಹಾಯ ಒದಗಿದೆ. ಈ ಮಂದಿರಗಳು ಮಕ್ಕಳ ಅಗತ್ಯಗಳೊಂದಿಗೆ ಹೊಂದಿಕೊಳ್ಳುವುದರಿಂದ ಸಾರ್ವಜನಿಕ ಶಾಲೆಗಳು ವಿಪಲವಾದರೂ ಇವು ಸಫಲವಾಗಬಲ್ಲವು. 

	ಆದರೆ ದೇಶದ ಅನೇಕ ಸಂಸ್ಥೆಗಳು ಈ ವಿದ್ಯಾಸೌಲಭ್ಯವನ್ನು ರೂಢಿಸುವ ಮಟ್ಟಕ್ಕೆ ಏರಿಲ್ಲ. ಅನೇಕ ಅನಾಥಾಲಯಗಳು ಪರಿವರ್ತನೆಯ ಮಟ್ಟದಲ್ಲಿವೆ. ಬೋಧನಕ್ರಮದಲ್ಲಿಯೂ ಬದಲಾವಣೆಗಳಾಗುತ್ತಿವೆ. ಈ ಮಂದಿರಗಳು ಶಾಲೆಯ ಬದಲು ಮನೆಗಳೆಂಬ ಭಾವನೆಯಿದ್ದುದರಿಂದ ಶಿಕ್ಷಣಸೇವೆಯಲ್ಲಿ ಹಿಂದುಳಿದಿದ್ದವು. ಆದರೆ ಈಗ ಬಾಲ್ಯವನ್ನು ವಿದ್ಯೆಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳುತ್ತಿರುವುದರಿಂದ ಅನಾಥಾಲಯಗಳ ಜೀವನವೂ ಬೌದ್ಧಿಕ, ಕೈಗಾರಿಕಾ ಮತ್ತು ಸಾಮಾಜಿಕ ತರಬೇತಿಯಲ್ಲಿ ಉನ್ನತಮಟ್ಟದ ಶಿಕ್ಷಣವಿತ್ತು ಅನಾಥರ ಮುಂದಿನ ಜೀವನಪಥ ಸುಗಮವಾಗಲು ನೆರವು ನೀಡುತ್ತಿವೆ.		   
(ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ